ಅಪ್ಪನ ಹತ್ಯೆಗೈದು 30 ತುಂಡು ತುಂಡಾಗಿ ಕತ್ತರಿಸಿ ಕೊಳವೆಬಾವಿಗೆ ತುರುಕಿದ ಮಗ! | JANATA NEWS
ಬಾಗಲಕೋಟೆ : ಮಗನೊಬ್ಬ ತಂದೆಯನ್ನ ಹತ್ಯೆ ಮಾಡಿ 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಕೊಳವೆ ಬಾವಿಗೆ ಬಿಸಾಕಿರುವ ಭಯಾನಕ ಘಟನೆ ಮುಧೋಳ ನಗರದಲ್ಲಿ ನಡೆದಿದೆ.
ಪರಶುರಾಮ ಕುಳಲಿ(54) ಹತ್ಯೆಯಾಗಿರುವ ವ್ಯಕ್ತಿ. ಆತನ ಪುತ್ರ ವಿಠಲ ಕುಳಲಿ(20) ರಾಡ್ನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿರುವ ಆರೋಪಿ. ತಂದೆಯ ದೇಹವನ್ನು 30ಕ್ಕೂ ಹೆಚ್ಚ ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ.
ನನ್ನ ಗಂಡ ಒಂದು ವಾರದಿಂದ ಕಾಣಿಸ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನ ಇದೆ. ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಸರ್… ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಕುಡಿದ ಮತ್ತಲ್ಲಿ ತಂದೆ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಡಿಸೆಂಬರ್ 6 ರಂದು ಮದ್ಯಪಾನ ಮಾಡಿದ್ದ ಮಗನಿಗೆ ಪರಶುರಾಮ ಬೈದು, ಎರಡೇಟು ಹೊಡೆದು ಬುದ್ಧಿವಾದ ಹೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿಠಲ ತಂದೆಗೆ ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಬಳಿಕ ತಂದೆ ಶವವನ್ನು ಎಸೆಯಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿಯಿರುವ ತಮ್ಮ ಹೊಲಕ್ಕೆ ಹೋಗಿದ್ದಾನೆ. ಹೊಲದಲ್ಲಿನ ಬೋರ್ವೆಲ್ನಲ್ಲಿ ತಂದೆ ಶವ ಹಾಕಲು ಪ್ರಯತ್ನಿಸಿದ್ದಾನೆ. ಆದ್ರೆ ಅದು ಒಳಕ್ಕೆ ಹೋಗಿಲ್ಲ. ಹೀಗಾಗಿ ಕೊಡಲಿ ತೆಗೆದುಕೊಂಡು ಶವವನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ನಂತರ ಕೊಳವೆ ಬಾವಿಯೊಳಕ್ಕೆ ಹಾಕಿದ್ದಾನೆ.
ಬಳಿಕ ಒಂದು ವಾರ ಏನೂ ಅರಿಯದಂತೆ ಊರಲ್ಲಿ ಓಡಾಡಿಕೊಂಡಿದ್ದ. ಅನುಮಾನಗೊಂಡ ತಾಯಿ, ಮುಧೋಳ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಆರೋಪಿ ವಿಠಲನನ್ನು ಬಂಧಿಸಿರುವ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.